ಕೊಪ್ಪಳ ಏ. ೧೯ (ಕರ್ನಾಟಕ ವಾರ್ತೆ) : ಕೊಪ್ಪಳ ಜಿಲ್ಲೆಯ ೧೩೦ ಗ್ರಾಮ ಪಂಚಾಯತಿಗಳಿಗೆ ಚುನಾವಣೆ ನಡೆಸುವ ಸಂಬಂಧ ಅಧಿಸೂಚನೆಯನ್ನು ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಅವರು ಪ್ರಕಟಿಸಿದ್ದಾರೆ.
ಜಿಲ್ಲೆಯ ೧೩೪ ಗ್ರಾಮ ಪಂಚಾಯಿತಿಗಳ ಪೈಕಿ ಯಲಬುರ್ಗಾ ತಾಲೂಕಿನ ಹಿರೇಮ್ಯಾಗೇರಿ, ಗಂಗಾವತಿ ತಾಲೂಕಿನ ಸಿದ್ದಾಪುರ ಮತ್ತು ಮುಸ್ಟೂರು ಹಾಗೂ ಕುಷ್ಟಗಿ ತಾಲೂಕಿನ ಕಬ್ಬರಗಿ ಸೇರಿದಂತೆ ೦೪ ಗ್ರಾಮ ಪಂಚಾಯಿತಿಗಳ ಅವಧಿಯು ೨೦೧೦ ರ ಜುಲೈ ನಂತರ ಮುಕ್ತಾಯಗೊಳ್ಳುವುದರಿಂದ, ಈ ಗ್ರಾಮ ಪಂಚಾಯಿತಿಗಳನ್ನು ಹೊರತುಪಡಿಸಿ, ಉಳಿದ ೧೩೦ ಗ್ರಾಮ ಪಂಚಾಯತಿಗಳಿಗೆ ಚುನಾವಣೆ ನಡೆಯಲಿದೆ. ಗ್ರಾಮ ಪಂಚಾಯತಿ ಚುನಾವಣೆಗಾಗಿ ನಾಮಪತ್ರಗಳನ್ನು ಸಲ್ಲಿಸಲು ಏ. ೨೬ ಸೋಮವಾರ ಕೊನೆಯ ದಿನವಾಗಿರುತ್ತದೆ. ನಾಮಪತ್ರಗಳನ್ನು ಏ. ೨೭ ಮಂಗಳವಾರದಂದು ಪರಿಶೀಲಿಸಲಾಗುವುದು. ಉಮೇದುವಾರಿಕೆಯನ್ನು ಹಿಂಪಡೆಯಲು ಏ. ೨೯ ಗುರುವಾರ ಕೊನೆಯ ದಿನವಾಗಿರುತ್ತದೆ. ಮತದಾನದ ಅಗತ್ಯವಿದ್ದರೆ ಮತದಾನವನ್ನು ಮೇ ೦೮ ಶನಿವಾರದಂದು ಬೆಳಿಗ್ಗೆ ೦೭ ಗಂಟೆಯಿಂದ ಸಂಜೆ ೫ ಗಂಟೆಯವರೆಗೆ ನಡೆಸಲಾಗುವುದು. ಒಂದು ವೇಳೆ ಯಾವುದೇ ಕಾರಣಕ್ಕೆ ಮರು ಮತದಾನದ ಅಗತ್ಯವಿದ್ದಲ್ಲಿ ಮೇ. ೧೨ ಬುಧವಾರದಂದು ನಡೆಸಲಾಗುವುದು. ಮತಗಳ ಎಣಿಕೆ ಕಾರ್ಯವು ಮೇ ೧೭ ರಂದು ಸೋಮವಾರ ಬೆಳಿಗ್ಗೆ ೮ ಗಂಟೆಗೆ ಆಯಾ ತಾಲೂಕು ಕೇಂದ್ರಗಳಲ್ಲಿ ನಡೆಯಲಿದೆ. ಚುನಾವಣೆ ಪ್ರಕ್ರಿಯೆಯನ್ನು ಮೇ. ೧೮ ರ ಒಳಗೆ ಪೂರ್ಣಗೊಳಿಸಲಾಗುವುದು. ಚುನಾವಣಾ ನೀತಿ ಸಂಹಿತೆಯು ಮೇ. ೧೫ ರಿಂದ ೧೮ ರವರೆಗೆ ಜಾರಿಯಲ್ಲಿರುವುದರಿಂದ, ಸುಗಮ ಹಾಗೂ ಶಾಂತಿಯುತ ಚುನಾವಣೆಗೆ ಸಾರ್ವಜನಿಕರು ಸಹಕರಿಸುವಂತೆ ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಅವರು ತಿಳಿಸಿದ್ದಾರೆ.
ಕೊಪ್ಪಳ : ಪರವಾನಗಿ ಪಡೆಯಲು ಉದ್ದಿಮೆದಾರರಿಗೆ ನಗರಸಭೆ ಸೂಚನೆ
ಕೊಪ್ಪಳ ಏ. ೧೯ (ಕರ್ನಾಟಕ ವಾರ್ತೆ) : ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಉದ್ದಿಮೆದಾರರು, ಅಂಗಡಿಯ ಮಾಲೀಕರು ತಾವು ನಡೆಸುವ ಉದ್ದಿಮೆಗೆ ನಗರಸಭೆಯಿಂದ ತಪ್ಪದೆ ಪರವಾನಗಿ ಪಡೆದುಕೊಳ್ಳುವಂತೆ ನಗರಸಭೆ ಪೌರಾಯುಕ್ತ ಎಚ್.ಬಿ. ಬೆಳ್ಳಿಕಟ್ಟಿ ಅವರು ಸೂಚನೆ ನೀಡಿದ್ದಾರೆ.
ನಗರಸಭೆ ವ್ಯಾಪ್ತಿಯಲ್ಲಿ ಬರುವ ಅಂಗಡಿಯ ಮಾಲೀಕರು ತಾವು ನಡೆಸುತ್ತಿರುವ ವಿವಿಧ ರೀತಿಯ ಅಂಗಡಿಗಳ ಲೈಸೆನ್ಸ್ ಪಡೆದುಕೊಂಡು ಉದ್ದಿಮೆಯನ್ನು ನಡೆಸಬೇಕು. ಲೈಸೆನ್ಸ್ ಪಡೆಯದೆ ಉದ್ದಿಮೆ ನಡೆಸುವವರ ವಿರುದ್ಧ ಕರ್ನಾಟಕ ಪುರಸಭೆ ಕಾಯ್ದೆಯನ್ವಯ ಕ್ರಮ ಜರುಗಿಸಲಾಗುವುದು. ಉದ್ದಿಮೆದಾರರು ಕೂಡಲೆ ನಗರಸಭೆಗೆ ನಿಗದಿತ ಶುಲ್ಕ ಪಾವತಿಸಿ ಲೈಸೆನ್ಸ್ ಪಡೆದುಕೊಳ್ಳುವಂತೆ ಕೊಪ್ಪಳ ನಗರಸಭೆ ಪೌರಾಯುಕ್ತ ಹೆಚ್.ಬಿ. ಬೆಳ್ಳಿಕಟ್ಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯಾದಗಿರಿ ಜಿಲ್ಲೆಯ ೧೧೪ ಗ್ರಾಮ ಪಂಚಾಯತಿಗಳ ಚುನಾವಣೆ: ಏ.೧೯ ರಿಂದ ಅಧಿಸೂಚನೆ ಜಾರಿ
ಯಾದಗಿರಿ,ಏ.೧೯.(ಕ.ವಾ.)- ರಾಜ್ಯ ಚುನಾವಣಾ ಆಯೋಗದ ಆದೇಶದನ್ವಯ ಯಾದಗಿರಿ ಜಿಲ್ಲೆಯ ೧೧೭ ಗ್ರಾಮ ಪಂಚಾಯತಿಗಳ ಪೈಕಿ ಅವಧಿ ಮುಗಿದಿರುವ ೧೧೪ ಗ್ರಾಮ ಪಂಚಾಯತಿಗಳಿಗೆ ೨೦೧೦ರ ಮೇ ೮ ರಂದು ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ೨೦೧೦ರ ಏಪ್ರಿಲ್ ೧೯ ರಿಂದ ಅಧಿಸೂಚನೆ ಹೊರಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ|| ಕೆ.ಜಿ. ಜಗದೀಶ ಅವರು ತಿಳಿಸಿದ್ದಾರೆ.
ಯಾದಗಿರಿ ಜಿಲ್ಲೆಯ ಸುರಪೂರ ತಾಲೂಕಿನ ಕಕ್ಕೇರಾ, ಕರಡಕಲ್ ಹಾಗೂ ಪರಸನಳ್ಳಿ ಗ್ರಾಮ ಪಂಚಾಯಿತಿಗಳನ್ನು ಹೊರತುಪಡಿಸಿ ಉಳಿದ ೧೧೪ ಗ್ರಾಮ ಪಂಚಾಯತಿಗಳ ಚುನಾವಣೆಗಾಗಿ ಏಪ್ರಿಲ್ ೧೯ ರಿಂದ ೨೬ರವರೆಗೆ ನಾಮಪತ್ರಗಳನ್ನು ಸ್ವೀಕರಿಸಲಾಗುವುದು. ೨೦೧೦ರ ಏಪ್ರಿಲ್ ೨೭ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ೨೦೧೦ರ ಏಪ್ರಿಲ್ ೨೯ ರಂದು ಮಧ್ಯಾಹ್ನ ೩ ಗಂಟೆಯೊಳಗೆ ಉಮೇದುವಾರಿಕೆಯನ್ನು ಹಿಂಪಡೆಯಬಹುದು. ಚುನಾವಣೆಯು ೨೦೧೦ರ ಮೇ ೮ ರಂದು ಬೆಳಗಿನ ೭ ರಿಂದ ಸಂಜೆ ೫ ಗಂಟೆಯವರೆಗೆ ನಡೆಯುವುದು. ಆಯಾ ತಾಲೂಕಿನ ಕೇಂದ್ರ ಸ್ಥಳಗಳಲ್ಲಿ ಮತ ಎಣಿಕೆಯು ಮೇ ೧೭ ರಂದು ಬೆಳಿಗ್ಗೆ ೮ ಗಂಟೆಯಿಂದ ನಡೆಯಲಿದೆ.
ಮತದಾರರು ಹಾಗೂ ಸಾರ್ವಜನಿಕರು ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ಶಾಂತಿಯುತವಾಗಿ ಹಾಗೂ ಯಾವುದೇ ರೀತಿಯ ಅಹಿತಕರ ಘಟನೆಗಳು ಜರುಗದಂತೆ ಸಹಕರಿಸುವಂತೆ ಜಿಲ್ಲಾಧಿಕಾರಿಗಳು ಕೋರಿದ್ದಾರೆ.